ಬೇಗೂರು
ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಒಂದು ಗ್ರಾಮ; ಬೆಂಗಳೂರಿನ ದಕ್ಷಿಣಕ್ಕೆ ಸುಮಾರು 13 ಕಿಮೀ ದೂರದಲ್ಲಿದೆ. ಜನಸಂಖ್ಯೆ 4,554 (1971). ಈ ಸ್ಥಳದಲ್ಲಿ ದೊರೆತಿರುವ ಐತಿಹಾಸಿಕ ದಾಖಲೆಗಳು 9ನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತವೆ. 920ರಲ್ಲಿ ಗಂಗರಾಜ ಎರೆಯಪ್ಪ ಮತ್ತು ನೊಳಂಬರಾಜ ಮಹೇಂದ್ರರ ಯುದ್ಧದಲ್ಲಿ ಮಡಿದ ಸ್ಥಳೀಯ ಪ್ರಮುಖ ನಾಗತ್ತರನ ಸ್ಮಾರಕವಾಗಿ ಕಡೆದ ಇಲ್ಲಿಯ ಒಂದು ಕಲ್ಲು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿದೆ. 

	ಇಲ್ಲಿರುವ ಪ್ರಾಚೀನ ನಾಗೇಶ್ವರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಇದರಲ್ಲಿ ನಾಗೇಶ್ವರ, ನಗರೇಶ್ವರ, ಚೋಳೇಶ್ವರ, ಕರ್ಣೇಶ್ವರ ಮತ್ತು ಕಮಠೇಶ್ವರ ಎಂಬ ಪಂಚಲಿಂಗಗಳಿವೆ. ಪ್ರತಿಯೊಂದಕ್ಕೂ ಪ್ರತ್ಯೇಕ ಗುಡಿಗಳಿವೆ. ಈ ದೇವಾಲಯಗಳು ಸುಮಾರು 10ನೆಯ ಶತಮಾನದವು. ಕಮಠೇಶ್ವರ ಗುಡಿಯ ಕೈಸಾಲೆಯಲ್ಲಿ ಎರಡು ತಮಿಳು ಹಾಗೂ ಒಂದು ಹಳಗನ್ನಡ ಶಾಸನಗಳಿವೆ. ಆರ್. ನರಸಿಂಹಾಚಾರ್ಯರು, ಕನ್ನಡ ಶಾಸನದ ಕಾಲ ಕ್ರಿ.ಶ.ಸು.900 ಎಂದು ನಿರ್ಧರಿಸಿದ್ದಾರೆ. ಈ ಶಾಸನದಲ್ಲಿ ಬೆಂಗಳೂರಿನ ಉಲ್ಲೇಖವಿದ್ದು ಬೆಂಗಳೂರಿನ ಪ್ರಾಚೀನತೆಗೆ ಇದು ಸಾಕ್ಷಿ ಎನಿಸಿದೆ. ಶಾಸನಗಳ ಆಧಾರದ ಮೇಲೆ ಹಿಂದೆ ಇದೊಂದು ಜೈನ ಕ್ಷೇತ್ರವಾಗಿತ್ತೆಂದು ತಿಳಿಯುತ್ತದೆ. ಇಲ್ಲಿ ಅಕ್ಕಸಾಲೆ ಮಠವೆಂದು ಕರೆಯುವ ಲಿಂಗಾಯಿತ ಚಿಕ್ಕಣ್ಣಯ್ಯನ ಮಠವೊಂದಿದೆ. ಇದು ಹೊಸೂರಿನ ಮಠದ ಒಂದು ಶಾಖೆ. ಈ ಮಠಕ್ಕೆ ಸೇರಿದಂತೆ ವೀರಭದ್ರ ದೇವಾಲಯವಿದೆ. ಈ ಗ್ರಾಮದಲ್ಲಿ ಸುಮಾರು 150 ವರ್ಷಗಳಿಗೂ ಹಿಂದಿನ ಒಂದು ಚರ್ಚ್ ಇದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ